Sunday, July 19, 2015

ನೆನಪು

ನಿನ್ನೆಯ ನೆನಪನ್ನು ನಾಳೆಗೆ
ಹೊತ್ತುಕೊಂಡು ಬರುವೆ ನಾ ಕೂಲಿಗೆ
ಜೊತೆಯಲ್ಲೇ ಬರುವೆ
ಜತನದಲಿ ತರುವೆ
ಬೇಕಾದ ನೆನಪನ್ನು ಹೆಕ್ಕಿ
ಕ್ಷಣಮಾತ್ರದಲ್ಲೇ ಕೊಡುವೆ .....


ಗುಂಪಲ್ಲಿ ಕಲಹ ಮನೆಯಲ್ಲಿ ವಿರಹ
ಕಾವೇರಿರಲು  ವಿಷಘಳಿಗೆ
ನೆನಪಿಸುವೆ ಮನೆಯವರ ನೆರವು
ಜೊತೆ ನಿಂತ ಸ್ನೇಹಿತರ ಸಲಿಗೆ 

ಹೊಸದೊಂದು ಕಾರ್ಯ,  ನಡುಗಿರಲು  ಸ್ಥೈರ್ಯ
ಕಾದಿರಲು ಎದುರಲ್ಲಿ  ಸೋಲೇ
ಕಳೆದ ದಿನಗಳನ್ನೆಲ್ಲಾ ಅನುಭವವಗೊಳಿಸಿ
ಕೈಗಿಡುವೆ  ವಿಜಯದ ಮಾಲೆ


ನೀನೆದ್ದು ಬಂದಾಗ, ಮೇಲೆದ್ದು ಗೆದ್ದಾಗ
ಸುತ್ತೆಲ್ಲ ಮೊಳಗಿರಲು ನಗಾರಿ
 ಜಂಬವನು ಜಗ್ಗಿ, ಕಿವಿಯಲ್ಲಿ ಬಗ್ಗಿ  
ನೆನಪಿಸಿವೆ ನೀ ನಡೆದ  ದಾರಿ